ತೀಯಾಗ್ನಿಸ್
	ಗ್ರೀಕ್ ಕವಿ. ಈತ ಉಚ್ಛ್ರಾಯ ಸ್ಥಿತಿಯಲ್ಲಿದ್ದುದು ಕ್ರಿ. ಪೂ. 6ನೆಯ ಶತಮಾನದ ಉತ್ತರಾರ್ಧದಲ್ಲಿ ಎಲಿಜಿ (ನೋಡಿ- ಎಲಿಜಿ) ಎಂಬ ಪ್ರಗಾಥಗಳನ್ನು ರಚಿಸಿದ ಆಗಿನ ಕವಿಗಳಲ್ಲಿ ಇವನೂ ಒಬ್ಬ ಆರು ಗಣಗಳ ಪಂಕ್ತಿಯೇ ಎಲಿಜಿಯ ಛಂದೋಮೂಲ; ಎರಡು ಪಂಕ್ತಿಗಳು ಸೇರಿ ಒಂದು ದ್ವಿಪದಿ ಅಥವಾ ಶ್ಲೋಕ, ಎರಡನೆಯ ಪಂಕ್ತಿಗೆ ಐದು ಗುಣಗಳಾಗುತ್ತವೆ. ಉಚ್ಚರಾಂಶಗಳು ಹ್ರಸ್ವವಾಗಿ ಹಲವು ದ್ವಿಪದಿಗಳು ಕೂಡಿಕೊಂಡು ಒಂದು ಬಗೆಯ ವೃತ್ತಾವಾಗುತ್ತವೆ ; ಹಲವು ವೃತ್ತಗಳ ಕೂಟವೇ ಒಂದು ಪ್ರಗಾಥ. ಎಲಿಜಿ ಹಾಡುಗಬ್ಬ; ತೀಯಾಗ್ನಿಸ್ಸನ ಪದ್ಯಗಳನ್ನು ಭೋಜನಗಳಲ್ಲಿ ಕೊಳಲಿನ ಜೊತೆ ಹಾಡುತ್ತಿದ್ದರು. ಹೀಗೆ ಸಂಗೀತದ ಹಿನ್ನೆಲೆಯಿಂದಲೂ ವಿಶಿಷ್ಟ ಛಂದಸ್ಸಿನ ಬಳಕೆಯಿಂದಲೂ ತನ್ನ ಅಂಕಿತವನ್ನು ಪಡೆದ ಎಲಿಜಿ ಮೊದಮೊದಲು ಯುದ್ಧ ಗೀತವಾಗಿತ್ತು; ಆಮೇಲೆ ಪ್ರೇಮಗೀತವಾಯಿತು. ಕೊನೆಯಲ್ಲಿ ಸತ್ತವರನ್ನು ಕುರಿತು ಶೋಕಗೀತವಾಯಿತು. ಈಗ ಎಲಿಜಿ ಎಂದರೆ ಶೋಕಗೀತೆ. 

	ತೀಯಾಗ್ನಿಸ್ಸನ ಜನ್ಮಭೂಮಿಯಾದ ಮೆಗಾರ ಪ್ರಾಂತ್ಯ ಆ ಕಾಲಕ್ಕೆ ಪ್ರಬಲ ರಾಜಕೀಯ ಪಕ್ಷಗಳ ಮತ್ಸರಪೂರ್ಣ ಹೋರಾಟದಿಂದ ಪ್ರಕ್ಷುಬ್ಧವಾಗಿತ್ತು. ಮುಖ್ಯವಾಗಿ ಕುಲೀನ ವರ್ಗವೂ ಒಂದನ್ನೊಂದು ನಾಶಗೊಳಿಸುವ ತುಮುಲಸಂಗ್ರಾಮಕ್ಕೆ ಇಳಿದಿದ್ದುವು. ತೀಯಾಗ್ನಿಸ್ ಕುಲೀನ ಪಂಗಡದ ಬದ್ದ ಬೆಂಬಲಿಗ ಮತ್ತು ಯೋಧ. ಜನತೆಯೆಂದರೆ ಇವನಿಗೆ ಅತ್ಯಂತ ಅಸಹ್ಯ. ವಿಪರೀತ ಕ್ರೋಧ. ಪ್ರಜಾಪಕ್ಷ ಬಲಿಷ್ಠವಾಗಿ ಇವನ ಮಿತ್ರಬಾಂಧವರನ್ನು ಸಂಹರಿಸಿ, ಇವನನ್ನು ದೇಶದಿಂದಾಚೆ ದೂಡಿತು. ಆ ಸಂದರ್ಭದಲ್ಲಿ ಈತ ಕಟ್ಟಿದ ಪ್ರಗಾಥದಲ್ಲಿ ಅವರ ಕಪ್ಪುರಕ್ತವನ್ನು ನನಗೆ ಕುಡಿಯಕೊಡು ಎಂದ ದೇವ ದೇವ ಜ್ಯೂಸನಿಗೆ ಪ್ರಾರ್ಥನೆ ಸಲ್ಲಿಸುತ್ತಾನೆ. ಆ ನೀಚ ಶತ್ರುಗಳ ಮೇಲೆ ಎಷ್ಟು ಬಯ್ಗಳನ್ನು ಸುರಿದರೂ ಇವನಿಗೆ ತೃಪ್ತಿಯಿಲ್ಲ. ಆಗ ಪ್ರತಿಯೊಬ್ಬ ವೀರಯೋಧನೂ ತನ್ನೊಡನೆ ಕದನರಂಗಕ್ಕೆ ಒಬ್ಬ ಕುಲೀನ ಬಾಲಕನನ್ನು ಅನುಚರನಂತೆ ಕರೆದುಕೊಂಡು ಹೋಗುವ ವಾಡಿಕೆ ಡೋರಿಯನರಲ್ಲಿತ್ತು. ಇದರಂತೆ ತೀಯಾಗ್ನಿಸ್ಸನ ಅನುಚರ ಕುರ್ನಾಸ್ ಅವನನ್ನು ಸುರಕ್ಷಿತವಾಗಿ ನೋಡಿಕೊಂಡು ಅಪಾಯಕ್ಕೆ ಸಿಕ್ಕದಂತೆಯೂ ಗಾಯಗೊಳ್ಳದಂತೆಯೂ ಕಾಪಾಡಿ ಹಿಂದಕ್ಕೆ ಕರೆತರುವುದು ತೀಯಾಗ್ನಿಸ್ಸನ ಜವಾಬ್ದಾರಿ. ಜೊತೆಗೆ ಹುಡುಗನಿಗೆ ತರಬೇತು ಕೊಡುವುದೂ ಡೋರಿಯನ್ ಯೋಧವೃತ್ತಿಯ ವಿಯಮಾವಳಿಯನ್ನು ಕಲಿಸುವುದೂ ಇವನ ಪಾಲಿನ ಕರ್ತವ್ಯವಾಗಿತ್ತು.; ಅವುಗಳಲ್ಲಿ ಪ್ರಮುಖವಾದವು ಇವು: ಹಿಂಜರಿಯದೆ ಹಿಮ್ಮೆಟ್ಟದೆ ಕಾಳಗಮಾಡುವಿಕೆ, ನೋವು ಉಂಟಾದರೆ ಮಾತಾಡದೆ ಹಲ್ಲುಕಚ್ಚಿ ಸಹಿಸುವುದು, ಸ್ನೇಹಿತನನ್ನು ಕೈಬಿಡದಿರುವಿಕೆ. ಸುಳ್ಳು ಹೇಳದಿರುವಿಕೆ, ಮೇಲಾಗಿ ಕೀಳುಮಂದಿಯೊಂದಿಗೆ ಸೇರದಿರುವುದು. ಯೋಧರ ಮತ್ತು ಬಾಲಕರ ಕಡ್ಡಾಯ ಸಂಗ ಪೂರ್ತಿ ಶುಚಿಯಾಗಿತ್ತೆಂದು ಹೇಳಲಾಗುವುದಿಲ್ಲ. ತೀಯಾಗ್ನಿಸ್ಸನ ಕವನದಲ್ಲಿ ಉಳಿದು ಬಂದಿರುವ ತುಣುಕುಗಳಲ್ಲಿ ಕುರ್ನಾಸಿಗಾಗಿ ಬರೆದ ನೀತಿಬೋಧೆ, ಚೆಲುವಾಗಿದೆ, ಉತ್ಕøಷ್ಟವಾಗಿದೆ. ಧೈರ್ಯಸಂಯಮ ಕುಲೀನ ಗರ್ವ ಧ್ಯೇಯಪಾಲನೆ ಮುಂತಾದ ಗಂಡುಗುಣಗಳಿಗೆ ಅದರಲ್ಲಿ ವಿಶೇಷ ಪ್ರಶಸ್ತಿ. 

	ಸಾರೋಕ್ತಿಗಳಿಗೂ ತೀಯಾಗ್ನಿಸ್ ಪ್ರಸಿದ್ಧ. ಅವುಗಳಲ್ಲಿ ಕೆಲವನ್ನಂತೂ ಮರೆಯುವಂತಿಲ್ಲ. 

		 `ಸಜ್ಜನಿಕೆ ಅತಿ ಚೆಲುವು, ಆರೋಗ್ಯ ಅತ್ಯುತ್ತಮ,
		 ಹೃದಯಾಪೇಕ್ಷೆ ಸಂದುಬಂದರೆ ಅತ್ಯಂತ ಹಿತ 
		 ದ್ವೇಷಿಗಳನ್ನು ವಂಚಿಸುವವರು ಬಲು ಕಡಿಮೆ,
		 ನೈಜ ಪ್ರೀತಿಗೆ ದ್ರೋಹಮಾಡುವುದು ಬಲು ಸುಲಭ.'
		ಅವರು ಪಾನಮಾಡುವಾಗ ನೀನೂ ಕುಡಿ; ನಿನ್ನೆದೆ ನೊಂದಿರಬಹುದು. 
		 ಅದರ ಗಾಯಗಳ ಯಾವ ಜೀವಂತನೂ ಎಣಿಸದಿರಲಿ.
		 ತಾಳ್ಮೆಯಿಂದಿದ್ದಲ್ಲಿ ಸೌಖ್ಯದ ದಿನವುಂಟು ; ವೀರಕಾರ್ಯ
		 ಸಂತಸಗಳಿಗೆ ದಿನವುಂಟು ; ಎಲ್ಲರಿಗೂ ನಿನಗೂ.'

ಮುಚ್ಚುಮರೆಯಿಲ್ಲದ ಹಮ್ಮೂ ವೀರಪುರುಷ ಸಹಜ ಶೌರ್ಯವೂ ರಾಗಾವೇಶವೂ ಅಷ್ಟಿಷ್ಟು ರಹಸ್ಯವೂ ಕವಿ ತೀಯಾಗ್ನಿಸ್ಸಿಗೆ ಚಿರಂಥನ ಸ್ಥಾನವನ್ನು ತಂದುಕೊಟ್ಟಿವೆ. ಇವನ ವ್ಯಕ್ತಿ ವರ್ಚಸ್ಸು ಕಾದ ಕಬ್ಬಿಣದಂತೆ ಕೆಂಚಾಗಿದೆ, ಧಗೆಯುಳ್ಳ ಕಾವನ್ನು ಉಗುಳುತ್ತದೆ. ಈ ಉಕ್ತಿಗಳ ಸ್ವಾರಸ್ಯವನ್ನು ಭಾವಿಸಿ - 

		ಇತರರು ಸ್ಥಿಮಿತದಲ್ಲಿರುವಾಗ ಕುಡಿಯುವುದು ನಾಚಿಕೆಗೇಡು
		 ಇತರರು ಅಮಲಿನಲ್ಲಿರುವಾಗ ಕುಡಿಯದಿರುವುದು ನಾಚಿಕೆಗೇಡು.'
		`ರಭಸದವರ ನಡುವೆ ನಾನು ಅತಿ ರಭಸಿ;
		 ಸೌಮ್ಯದವರ ನಡುವೆ ನಾನು ಅತಿ ಸೌಮ್ಯ.

	 ಬಡತನದ ಬಹು ಬೇಗೆಯ ವ್ಯಾಖ್ಯಾನವನ್ನು ನೋಡಿ ; 

		 `ಬಡತನದಿಂದ ಪಾರಾಗಲು ಆಳಸಮುದ್ರಕ್ಕೆ ಬೀಳುವುದು
		 ಲೇಸು, ನೀಳ್ದುನಿಂದ ಬಂಡೆಯಿಂದ ದುಮುಕುವುದು ಲೇಸು.'
		 `ಓ ಸ್ಯೂಸ್, ಕೆಡುಕಿಗಳಿಗೆ ಸಂಪತ್ತು ಕೊಡುವ ನಿನಗೆ. 
		 ಸಜ್ಜನರನ್ನು ಕಾಡಿ ಪೀಡಿಸುವ ನಿನಗೆ, ಧಿಕ್ಕಾರವಿರಲಿ!' 

	ತೀಯಾಗ್ನಿಸ್ಸನ ಕವನಗಳು ಸಂಕಲನವಾದದ್ದು ಕ್ರಿ. ಪೂ. 4ನೆಯ ಶತಮಾನದಲ್ಲಿ. 		(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ